ಬಹುತೇಕ ಜನರು ಅರೋಗ್ಯ ಎಂದರೆ ರೋಗ ಇಲ್ಲದಿರುವಿಕೆ ಎಂದೇ ಭಾವಿಸಿದ್ದಾರೆ. ಆದರೆ ನಿಜದಲ್ಲಿ ಅರೋಗ್ಯ ಅಂದರೆ ಅದಕ್ಕಿಂತಲೂ ಬಹಳ ದೂರವಿದೆ. ತಮಾಷೆಯೆಂದರೆ, ಅನಾರೋಗ್ಯವನ್ನು ವ್ಯಾಖ್ಯಾನಿಸುವಷ್ಟು ಸುಲಭವಾಗಿ ಆರೋಗ್ಯವನ್ನು ವ್ಯಾಖ್ಯಾನಿಸಲು ಆಗುವುದಿಲ್ಲ. ಪ್ರಖ್ಯಾತ ಕವಿ ಮತ್ತು ಹೋರಾಟಗಾರ ವೆಂಡೆಲ್ ಬೆರಿ ಆರೋಗ್ಯವನ್ನು ಅಪ್ರಜ್ಞಾಪೂರ್ವಕ ಸುಖ ಎಂದು ಕರೆಯುತ್ತಾನೆ. ಆದರೆ, WHO ಪ್ರಕಾರ ಆರೋಗ್ಯವೆಂದರೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ.
ಹಾಗಾದರೆ ರೋಗ ಬರುವುದು ಹೇಗೆ? ಮತ್ತು ಅದು ಸಾವಿನ ತನಕ ಕೊಂಡೊಯ್ಯುವುದು ಯಾಕೆ?
ಆರೋಗ್ಯದ ಗೀಳಿಗಿಂತ ಆಹಾರದ ಮೂಲಕ ಅರೋಗ್ಯ ಯಾಕೆ ಮುಖ್ಯ?
-
ಅತಿಯಾಗಿ ಶುದ್ದೀಕರಿಸಿದ ಮತ್ತು ಸಂಸ್ಕರಿಸಿದ ಆಹಾರ ತ್ಯಜಿಸಿ:
ಉದಾಹರಣೆಗೆ, ಅಕ್ಕಿ. ಏನಿಲ್ಲವೆಂದರೂ ಕನಿಷ್ಠ ಹದಿನೈದು ಸಾವಿರ ವರ್ಷಗಳಿಂದ ಕಾಲದ ಪರೀಕ್ಷೆಗೆ ಒಡ್ಡಿಕೊಂಡ ಧಾನ್ಯ. ಆದರೆ ಅದರ ಶುದ್ದೀಕರಣ ಮತ್ತು ಪಾಲಿಶ್ ಮೂಲಕ ಅದರ ಮುಖ್ಯ ಪೋಷಕಾಂಶಗಳನ್ನೆಲ್ಲ ಇಲ್ಲವಾಗಿಸುವುದರಿಂದ ಸುಲಭದಲ್ಲಿ ಜೀರ್ಣವಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರುತ್ತದೆ. ಕೊನೆಗೆ ಮಧುಮೇಹಕ್ಕೆ ತುತ್ತಾಗುತ್ತೇವೆ. ಗೋಧಿಯನ್ನು ಶುದ್ದೀಕರಿಸುವಾಗ ಅದರ ಹೊಟ್ಟು ಮತ್ತು ಮೊಳಕೆ ನಾಶವಾಗುತ್ತದೆ. ಇದರಿಂದ ಚೆಂದವಾಗಿ ಕಾಣುತ್ತದೆ ಮತ್ತು ಬಹಳ ಕಾಲ ಬಾಳಿಕೆ ಬರುತ್ತದೆ. ಆದರೆ ಪೋಷಕಾಂಶಗಳು ನಾಶವಾಗುತ್ತವೆ. ಮುಖ್ಯವಾಗಿ ಶುದ್ದೀಕರಣದಲ್ಲಿ ನಾಶವಾಗುವ ನಾರಿನಂಶವು ನಮ್ಮ ಜೀರ್ಣಾಂಗದ ಪ್ರಕ್ರಿಯೆಗೆ ಬಹುಮುಖ್ಯ. ಮತ್ತೊಂದು ವಿರೋಧಾಭಾಸ ಶುದ್ದೀಕರಿಸಿದ ಎಣ್ಣೆಗಳದ್ದು. ಮಾರುಕಟ್ಟೆಯ ಅನುಕೂಲತೆಗಾಗಿ ಇವುಗಳನ್ನು ರಾಸಾಯನಿಕಗಳನ್ನು ಬಳಸಿ ಶುದ್ದೀಕರಣ ಮತ್ತು ಬ್ಲೀಚ್ ಮಾಡಲಾಗುತ್ತದೆ. ನಮ್ಮ ದೇಹದಲ್ಲಿ 32 ಅಡಿ ಉದ್ದದ ಅನ್ನನಾಳ ಮತ್ತು ಜೀರ್ಣಾಂಗದ ವ್ಯವಸ್ಥೆ ಇದೆ. ಇದು ಆಹಾರವನ್ನು ನಿಧಾನಕ್ಕೆ ಮತ್ತು ಸುಸ್ಥಿರವಾಗಿ ಜೀರ್ಣಗೊಳಿಸುತ್ತಾ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಇದೊಂದು ನಮ್ಮ ದೇಹದ ಸಂಕೀರ್ಣ ಅಚ್ಚರಿ. ಅತಿಯಾಗಿ ಶುದ್ದೀಕರಿಸಿ, ಪೋಷಕಾಂಶಗಳನ್ನೆಲ್ಲ ಕಳೆದುಕೊಂಡ ಕೊಬ್ಬು ಮತ್ತು ಧಾನ್ಯಗಳನ್ನು ಈ ವ್ಯವಸ್ಥೆಗೆ ನೀಡಿ ದಯವಿಟ್ಟು ಅದನ್ನು ಅಪಮಾನಿಸಬೇಡಿ.
-
ಆಹಾರದ ಸುರಕ್ಷತೆಗಾಗಿ ಸಾವಯವ ಅತ್ದುಕೊಳ್ಳಿ:
ಪರಿಪೂರ್ಣ ಆಹಾರದ ಮೂಲಕ ಸಿಗುವ ಪೋಷಕಾಂಶಗಳು ರೋಗಗಳನ್ನು ತಡೆಯುವ ಜಿತೆಗೆ ಆರೋಗ್ಯವನ್ನೂ ಉತ್ತೇಜಿಸುತ್ತವೆ. ದುರದೃಷ್ಟವಶಾತ್, ಇತ್ತೀಚಿಗೆ ಆಹಾರದ ಸುರಕ್ಷತೆಯನ್ನು ಇನ್ನಿಲ್ಲದಂತೆ ಕಡೆಗಣಿಸಲಾಗುತ್ತಿದೆ. ಬಣ್ಣ, ಕೃತಕ ರುಚಿ ಮತ್ತು ಪ್ರಿಸರ್ವೇಟಿವ್ ಹೆಸರಿನಲ್ಲಿ ಬಳಸಲಾಗುತ್ತಿರುವ ವಿಷಕಾರಿ ಅಂಶಗಳಾದ ಕೀಟನಾಶಕಗಳು, ಆಂಟಿಬಯೋಟಿಕ್ಸ್ ಮತ್ತು ಅಡಿಟಿವ್ಸ್ ಗಳಿಗೆ ಯಾವ ಲೆಕ್ಕವೂ ಇಲ್ಲ. ನಮ್ಮನ್ನು ಪೋಷಿಸಬೇಕಾಗಿದ್ದ ಆಹಾರ ರೋಗಗಳಿಗೆ ಹೆಬ್ಬಾಗಿಲಾಗುತ್ತಿದೆ. ಫುಡ್ ಮೈಲುಗಳನ್ನು ಕಡಿತಗೊಳಿಸಿ. ನಿಮ್ಮ ತಟ್ಟೆ ತಲುಪಲು ಆಹಾರವು ತೆಗೆದುಕೊಳ್ಳುವ ದೂರದ ಮೇಲೆ ಪ್ರಿಸರ್ವೇಟಿವ್ ಪ್ರಮಾಣವು ಅವಲಂಬಿತವಾಗಿದೆ. ಯಾಕೆಂದರೆ ತಾಜಾತನ ಉಳಿಸಿಕೊಳ್ಳಲು ಬೇರೆ ದಾರಿ ಇಲ್ಲವಲ್ಲ. ಮಾಂಸ ಮತ್ತು ಮಾಂಸ ಉತ್ಪನ್ನಗಳಲ್ಲಿ ಆಂಟಿಬಯೋಟಿಕ್ಸ್ ಬಳಕೆ ಆಹಾರ ಸುರಕ್ಷತೆಗೆ ಮತ್ತೊಂದು ದೊಡ್ಡ ಭೀತಿ ಜನಕ. ಇವು ನಮ್ಮ ದೇಹದಲ್ಲಿ ಸೇರಿಕೊಂಡರೆ ನಮ್ಮ ರೋಗ ನಿರೋಧಕ ಶಕ್ತಿಯು ವಿಪರೀತ ಏರಿಕೆಯಾಗುತ್ತದೆ. ಇದರಿಂದ ಸೋಂಕುಗಳು ಉಂಟಾದರೆ ಸಾಮಾನ್ಯ ಔಷಧಿಗಳು ಪ್ರಯೋಜನಕ್ಕೆ ಬರುವುದಿಲ್ಲ. ಈ ಕತೆಯ ಸಾರಾಂಶ ಹೇಳುವುದಾದರೆ ಸಾಧ್ಯವಾದಷ್ಟೂ ಸಾವಯವ ಆಯ್ದುಕೊಳ್ಳಬೇಕು ಎಂಬುದು. ತಾಜಾ, ಆಯಾ ಋತುಮಾನದ ಆಹಾರವನ್ನು ಸಾಧ್ಯವಾದಷ್ಟೂ ಸ್ಥಳೀಯ ರೈತರಿಂದ ಮತ್ತು ಉತ್ಪಾದಕರಿಂದ ಖರೀದಿಸಿ.
-
ನಿಮ್ಮ ಆಹಾರ ಪದ್ದತಿಯನ್ನು ವೈವಿಧ್ಯಗೊಳಿಸಿ:
ಋತುಮಾನಕ್ಕೆ ತಕ್ಕ ಆಹಾರ ಆಯ್ದುಕೊಳ್ಳುವುದರಿಂದ ಸಿಗುವ ಒಂದು ಲಾಭವೆಂದರೆ ವರ್ಣರಂಜಿತ ಊಟದ ತಟ್ಟೆ. ಇದು ಆಹಾರದ ವಿಷಯದಲ್ಲಿ ಅತಿಮುಖ್ಯ ಸಂಗತಿ. ಯಾಕೆಂದರೆ ವೈವಿಧ್ಯತೆಯೇ ಒಳ್ಳೆಯ ಪೋಷಕಾಂಶಗಳ ಗಣಿ. ಹಿಂದಿನ ಕಾಲದಲ್ಲಿ, ಬೇಟೆಗಾರ ಸಮುದಾಯಗಳು ತಮ್ಮ ಸುತ್ತ ಲಭ್ಯವಿರುವ ಆಹಾರವನ್ನೇ ತಿನ್ನುತ್ತಿದ್ದರು. ಅಂದರೆ, ಆರೋಗ್ಯಕರವಾದ ಸ್ಥಳೀಯ, ಆಯಾ ಋತುಮಾನದ ಉತ್ಪನ್ನಗಳ ಜೊತೆಗೆ ಮಾಂಸ, ಹಣ್ಣು ಮತ್ತು ತರಕಾರಿಗಳು. ಈ ವೈವಿಧ್ಯತೆಯು ನಮ್ಮ ದೇಹದಲ್ಲಿರುವ ಟ್ರಿಲಿಯನ್ ಗಟ್ಟಲೆ ಮೈಕ್ರೋಬ್ ಗಳನ್ನೂ ಸಲಹುತ್ತದೆ ಎಂದು ಇವತ್ತು ನಮಗೆ ಗೊತ್ತು. ಅದರಲ್ಲೂ ಮುಖ್ಯವಾಗಿ ನಮ್ಮನ್ನು ತೆಳ್ಳಗೆ, ಫಿಟ್ ಮತ್ತು ಆರೋಗ್ಯಕರವಾಗಿರಿಸುವ ಕರುಳಿನ ಬ್ಯಾಕ್ಟೀರಿಯಾಗಳು. ಅದೇ ವೇಳೆ ಸೀಮಿತ ಡಯಟ್ ಹಲವು ಆಹಾರಗಳನ್ನು ಕೈಬಿಡುತ್ತದೆ. ಆ ಮೂಲಕ ನಿಮ್ಮ ಕರುಳಿನ ಮೈಕ್ರೋಬ್ ಗಳಿಗೆ ಆಹಾರ ಒದಗಿಸದೆ ನಿಮ್ಮನ್ನು ಸ್ಥೂಲಕಾಯವಾಗಿಸುತ್ತದೆ. ವಿವಿಧ ರೀತಿಯ ಆಹಾರ ಆಯ್ದುಕೊಳ್ಳುವುದೆಂದರೆ ನಿಮ್ಮ ದೇಹಕ್ಕೆ ಹಲವು ವಿಧದ ಪೋಷಕಾಂಶಗಳ ದೊರೆಯುವಿಕೆ ಎಂದೇ ಅರ್ಥ. ಟಿಪ್: ನಿಮ್ಮ ಆಹಾರವನ್ನು ಮತ್ತಷ್ಟು ಆಸಕ್ತಿದಾಯಕವಾಗಿಸಲು ಪೋಷಕಾಂಶಗಳನ್ನು ಉಳಿಸಿಕೊಂಡು ಬೇರೆ ಬೇರೆ ರೀತಿಯಲ್ಲಿ ಅಡುಗೆ ಮಾಡಿಕೊಳ್ಳಬಹುದು. ಲೆಜೆಂಡರಿ ಆಹಾರ ವಿಜ್ಞಾನಿ ಡಾ. ಗೋಪಾಲನ್ ಹೇಳಿದ ಹಾಗೆ ನಾವು ಆಹಾರದ ಅರೋಗ್ಯ ಗುಣಗಳನ್ನು ನೋಡಬೇಕೇ ಹೊರತು ಲೆಕ್ಕಹಾಕಬಹುದಾದ ಪೌಷ್ಟಿಕ ಮೌಲ್ಯಗಳನ್ನಲ್ಲ.
-
ಡಯಟ್ ಖಯಾಲಿಗೆ ಬಲಿಯಾಗಬೇಡಿ:
ಫ್ಯಾಡ್ ಡಯಟ್ ವೈವಿಧ್ಯತೆಯ ಶತ್ರು. ಇಂತಹ ಬಹುತೇಕ ಡಯಟ್ ವಿಧಾನಗಳು ಹಲವು ಆಹಾರ ಪದಾರ್ಥಗಳನ್ನು ತ್ಯಜಿಸುವಂತೆಯೂ ಮತ್ತೆ ಕೆಲವು ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸುವಂತೆಯೂ ಒತ್ತಾಯಿಸುತ್ತವೆ. ಆಶ್ಚರ್ಯಕರ ವಿಷಯ ಅಂದರೆ ಇನ್ತಹ ಬಹುತೇಕ ಡಯಟ್ ಗಳು ಆರೋಗ್ಯಕರ ಜೀವನದ ಅತಿ ಮುಖ್ಯ ಸಂಗತಿಯಾದ ವ್ಯಾಯಾಮದ ಬಗ್ಗೆ ಬಾಯಿ ಬಿಚ್ಚುವುದಿಲ್ಲ. ಅದು ಲೋ ಕಾರ್ಬ್, ಹೈ ಪ್ರೊಟೀನ್, ನೋ ಗ್ರೇಯ್ನ್ ಅಥವಾ ಗ್ರೀನ್ ಸ್ಮೂತೀಸ್ ತರದ ಯಾವುದೇ ಫ್ಯಾಡ್ ಡಯಟ್ ಆದರೂ ಅದು ನಿರ್ಬಂಧ ವಿಧಿಸುತ್ತದೆ ಮತ್ತು ಅವು ಬರಿಯ ತಾತ್ಕಾಲಿಕ ಪರಿಹಾರ ಮಾತ್ರ. ಯಾಕೆಂದರೆ ಕೊನೆಗೆ ಉಳಿಯುವುದು ನಿಮ್ಮ ಡಯಟರಿ ಪ್ಯಾಟರ್ನ್, ಅಲ್ಲದೆ ಯಾವುದೊ ತಾತ್ಕಾಲಿಕ ಖಯಾಲಿ ಅಲ್ಲವೇ ಅಲ್ಲ.
ಇಂದು ಎಪಿಜೆನೆಟಿಕ್ಸ್ ವಿಜ್ಞಾನವು ಸ್ಪಷ್ಟಪಡಿಸುತ್ತಿರುವುದೇನೆಂದರೆ, ಪೋಷಕಾಂಶಯುಕ್ತ ಆಹಾರ ಪದ್ದತಿ, ಆರೋಗ್ಯಕರ ಜೀವನ ವಿಧಾನ ಮತ್ತು ಪರಿಸರಗಳು ರೋಗದಿಂದ ಮುಕ್ತಿ ನೀಡುವುದು ಮಾತ್ರವಲ್ಲ, ಕೆಟ್ಟ ಜೀನನ್ನು ಆಫ್ ಮಾಡಿ ಒಳ್ಳೆಯ ಜೀನನ್ನು ಆನ್ ಮಾಡುತ್ತದೆ. ಇದರರ್ಥ ಅನುವಂಶಿಕವೆಂದು ಪರಿಗಣಿಸಿದ್ದ ರೋಗಗಳನ್ನು ಆಹಾರ ಮತ್ತು ಪೋಷಕಾಂಶಗಳ ಮೂಲಕ ಗುಣಪಡಿಸಬಹುದು.
ಕೊನೆಯದಾಗಿ, ಆರೋಗ್ಯಕರ ಆಹಾರ ಸೇವನೆ ಎಂದ ತಕ್ಷಣ ಅದು ಸಂಕೀರ್ಣವಾದ ವಿಷಯವಾಗಿ ಕಾಣಬೇಕಿಲ್ಲ. ಸಂಸ್ಕರಿಸಿದ ಆಹಾರಗಳಿಗೆ ಬದಲಾಗಿ ಪರಿಪೂರ್ಣ, ಪ್ರಕೃತಿದತ್ತ ಮತ್ತು ಋತುಕಾಲಿಕ ಆಹಾರಗಳನ್ನು ಸಾಧ್ಯವಾದಷ್ಟೂ ಆಯ್ದುಕೊಳ್ಳುವುದು. ಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಿನ್ನಿರಿ. ಕೆಲವು ಆಹಾರಗಳನ್ನು ಕೈ ಬಿಡುವ ಬದಲು ಸಾಧ್ಯವಾದಷ್ಟೂ ಹೆಚ್ಚಿನ ಆಹಾರಗಳನ್ನು ತಿನ್ನಿರಿ. ನೀರು ಹೆಚ್ಚೇ ಕುಡಿಯಿರಿ. ಇಷ್ಟೇ! ನೀವೀಗ ಒಂದು ಜೀವಮಾನಕ್ಕೆ ಬೇಕಾದ ಆರೋಗ್ಯಕರ ಆಹಾರ ಪದ್ದತಿಯನ್ನು ಮೈಗೂಡಿಸಿಕೊಂಡಿದ್ದೀರಿ.
ಹಾಗಾದರೆ ನಡೆಯಿರಿ, ಊಟ ಮಾಡಿ ಆರೋಗ್ಯಕರ ಮತ್ತು ದೀರ್ಘವಾದ ಬದುಕು ಬಾಳಿರಿ!