ನೀವು ನಂಬುತ್ತೀರೋ ಇಲ್ಲವೋ, ಆದರೆ ನಮ್ಮ ದೇಹದ ತೂಕ ನಿಯಂತ್ರಣಕ್ಕೆ, ನಮ್ಮ ಆರೋಗ್ಯಕ್ಕೆ ಮತ್ತು ನಮ್ಮ ಅಸ್ತಿತ್ವಕ್ಕೆ ಕೂಡ ಕರುಳಿನ ಚಲನೆಯೇ ಮುಖ್ಯ ಕಾರಣ. ನಮ್ಮ ಮನೆಗಳಲ್ಲಿ ‘ಸಿಂಹಾಸನ’ವೇ ಮುಖ್ಯ ಆಸನವಾಗುವುದಕ್ಕೂ ಕಾರಣವಿದೆ.
ಹಾಗಾದರೆ ಇದು ನಮ್ಮ ಆಹಾರದಲ್ಲಿರುವ ನಾರಿನಂಶಕ್ಕೆ ಹೇಗೆ ಸಂಬಂಧಪಡುತ್ತದೆ?
ಮುಂದಕ್ಕೆ ನಿಮಗೆ ಇದರ ನೇರ ಸಂಬಂಧದ ಬಗ್ಗೆ ತಿಳಿಸುತ್ತೇನೆ. ಫೈಬರ್ ಅಥವಾ ನಾರುಗಳು ನಮ್ಮ ಕರುಳನ್ನು ಸ್ವಚ್ಛಗೊಳಿಸುವ ನೈಸರ್ಗಿಕ ಪೊರಕೆಯಂತೆ ಕೆಲಸ ಮಾಡುತ್ತದೆ. ಜೊತೆಗೆ ಹಲವು ತರದ ರೋಗಗಳಿಗೆ ಕಾರಣವಾಗುವ ವಿಷಕಾರಿ ಪದಾರ್ಥಗಳು ಶೇಖರಣೆಗೊಳ್ಳದಂತೆ ತಡೆಯುತ್ತದೆ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ಜೊತೆಗೆ ಹೋರಾಡುತ್ತದೆ.
ಹಾಗಾದರೆ ನಾರುಗಳು ಎಂದರೇನು?
ಫೈಬರ್ ಅಥವಾ ನಾರುಗಳು ಅಂದರೆ ಸಸ್ಯಾಹಾರಗಳಲ್ಲಿರುವ ಜೀರ್ಣವಾಗದ ಭಾಗ – ಹೊಟ್ಟು, ತೊಗಟೆ ಇತ್ಯಾದಿ. ಇದನ್ನು ರಫೇಜ್ ಅಥವಾ ಬಲ್ಕ್ ಎಂದೂ ಕರೆಯುತ್ತಾರೆ. ಉಳಿದ ಕಾರ್ಬ್ ಗಳಂತೆ ಫೈಬರ್ ಸಕ್ಕರೆಯಾಗಿ ಬದಲಾಗುವುದಿಲ್ಲ. ಇದು ಕರುಳಿನ ಮೂಲಕ ಹಾದುಹೋಗುವಾಗ ಕರುಳಿನ ಬಿತ್ತಿಗಳಿಗೆ ತಾಗಿಕೊಂಡಂತೆ ಸಾಗುತ್ತದೆ. ಹೀಗೆ ಕೆಳಗಿಳಿಯುತ್ತಾ ಫೈಬರ್ ಬಹಳ ಕೆಲಸಗಳನ್ನು ಪೂರೈಸುತ್ತದೆ.
ಫ್ಯಾಕ್ಟ್: ನಾರುಗಳು ಕರುಗಬಲ್ಲ ಮತ್ತು ಕರಗದ ಭಾಗಗಳ ಮಿಶ್ರಣ. ಆದರೆ ದೇಹವು ಇವೆರಡನ್ನೂ ಕೂಡ ಹೀರಿಕೊಳ್ಳುವುದಿಲ್ಲ. |
ನಾರಿನಂಶ ಅಧಿಕವಿರುವ ಆಹಾರಗಳನ್ನು ಸೇವಿಸಿದರೆ ಏನಾಗುತ್ತದೆ?
ನಾರಿನ ಕರಗುವ ಭಾಗವು ಹೊಟ್ಟೆಯಲ್ಲಿ ಜೆಲ್ ಆಗಿ ಬದಲಾಗುತ್ತದೆ. ಈ ಜೆಲ್ ಜೀರ್ಣಕ್ರಿಯೆಯ ವೇಗವನ್ನು ನಿಯಂತ್ರಿಸುತ್ತದೆ, ಪೋಷಕಾಂಶಗಳನ್ನು ಹೆಚ್ಚು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಸಂತೃಪ್ತಿ ನೀಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಪರಿಧಮನಿಯ ಕಾಯಿಲೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಮೂಲಕ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ನಾರಿನಂಶ ಅಧಿಕವಿರುವ ಆಹಾರವು ಯಾವುದೇ ರೀತಿಯ ಸಕ್ಕರೆ ಸಮಸ್ಯೆ ಇರುವವರಿಗೆ ಉಪಯುಕ್ತವಾಗಿದೆ.
ಮತ್ತೊಂದೆಡೆ ಕರಗದ ನಾರು ನಮ್ಮ ದೇಹದ ತ್ಯಾಜ್ಯದಲ್ಲಿ ಬಹುಭಾಗವನ್ನು ಹೊಂದಿದೆ. ಇದು ಜೀರ್ಣ ಸಂಬಂಧೀ ಅಸ್ವಸ್ಥತೆಗಳಿಗೆ ಪರಿಹಾರ ನೀಡುತ್ತದೆ. ಇದು ಕರುಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮಲವಿಸರ್ಜನೆ ಸುಲಭವಾಗಿಸುತ್ತದೆ. ಇದರರ್ಥ ನಿಮ್ಮ ದೈನಂದಿನ ಆಹಾರದಲ್ಲಿ ನಾರಿನಂಶ ಇಲ್ಲದಿದ್ದರೆ ಮಲಬದ್ಧತೆಗೆ ಕಾರಣವಾಗಬಹುದು.
ಜೀರ್ಣಕ್ರಿಯೆ, ತೂಕ ನಿಯಂತ್ರಣ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಲು ಫೈಬರ್ ಭರಿತ ಆಹಾರಗಳು ಅಗತ್ಯ. |
ತೂಕ ಇಳಿಸಲು ನಾರುಗಳು
ನಾರಿನಂಶ ಅಧಿಕವಿರುವ ಆಹಾರವು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಲು ಹಲವು ಕಾರಣಗಳಿವೆ:
- ನಾರಿನಂಶ ನಿಮ್ಮ ಆಹಾರದ ಪ್ರಮಾಣವನ್ನು ಹೆಚ್ಚಿಸುತ್ತದೆ – ಇದು ಹೆಚ್ಚಿನ ಸಂತೃಪ್ತಿ ನೀಡುತ್ತದೆ, ಅಂದರೆ ಬೇಗನೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಮತ್ತು ಈ ಅನುಭವ ದೀರ್ಘ ಸಮಯ ಇರುತ್ತದೆ. ಹಾಗಾಗಿ ನೀವು ಅತಿಯಾದ ಆಹಾರ ಸೇವನೆಯಿಂದ ತಪ್ಪಿಸಿಕೊಳ್ಳುತ್ತೀರಿ.
- ಇದರಲ್ಲಿ ಕಡಿಮೆ ಕ್ಯಾಲೋರಿಯ ಅಂಶಗಳು ಸೇರಿವೆ – ನಾರಿನಂಶ ಅಧಿಕವಿರುವ ಮತ್ತು ಕ್ಯಾಲೋರಿ ಕಡಿಮೆಯಿರುವ ಹಣ್ಣುಗಳು ಮತ್ತು ತರಕಾರಿಗಳು ಸುಲಭದಲ್ಲಿ ಕ್ಯಾಲೋರಿ ಕಡಿತಗೊಳಿಸಲು ಸಹಾಯ ಮಾಡುತ್ತವೆ.
- ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ – ದಾಹ ಹೆಚ್ಚಿಸುವ ಇನ್ಸುಲಿನ್ ಸ್ಪೈಕ್ ಇಲ್ಲವಾಗಿಸುವ ಮೂಲಕ ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಅನಾರೋಗ್ಯಕರ ಆಹಾರಗಳ ಕಡೆಗಿನ ಒಲವು ಇಳಿಯುತ್ತದೆ.
- ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ – ಜೀರ್ಣಾಂಗಗಳಲ್ಲಿ ಕೊಬ್ಬನ್ನು ಸಾಗಿಸುವುದು ನಾರುಗಳು. ಹಾಗಾಗಿ ಹೆಚ್ಚು ನಾರುಗಳನ್ನು ಸೇವಿಸಿದರೆ ಕೊಬ್ಬು ವೇಗವಾಗಿ ಸಾಗಿ ದೇಹವು ಕೊಬ್ಬನ್ನು ಶೇಖರಿಸಿಡುವುದು ಕಡಿಮೆಯಾಗುತ್ತದೆ.
- ನಾರಿನಂಶ ಅಧಿಕವಿರುವ ಆಹಾರವು ಕರುಳನ್ನು ಆರೋಗ್ಯಕರವಾಗಿರಿಸುತ್ತದೆ – ಫೈಬರ್ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಸಲಹುತ್ತದೆ. ಇದರಿಂದಾಗಿ ಒಳ್ಳೆಯ ಮತ್ತು ಕೆಟ್ಟ ಮೈಕ್ರೋಬುಗಳ ನಡುವೆ ಸೂಕ್ಷ್ಮ ಸಮತೋಲನ ಸಾಧ್ಯವಾಗುತ್ತದೆ. ಇದು ತೂಕ ನಿಯಂತ್ರಣದಲ್ಲಿ ನಾರುಗಳ ಅತಿ ಮುಖ್ಯ ಪಾತ್ರ ಹೇಗಾಗುತ್ತದೆ ಎಂದು ತಿಳಿದುಕೊಳ್ಳಲು ಮುಂದೆ ಓದಿ. .
ನಿಮಗೆ ಗೊತ್ತಾ? ಕೆಟ್ಟ ಬ್ಯಾಕ್ಟೀರಿಯಾವು ನಿಮ್ಮನ್ನು ಸ್ಥೂಲಕಾಯಗೊಳಿಸುತ್ತದೆ! ಅತಿಯಾದ ಹಸಿವು ಮತ್ತು ಕೊಬ್ಬಿನ ಶೇಖರಣೆಯನ್ನು ಉತ್ತೇಜಿಸುವ ಚಯಾಪಚಯ ಬದಲಾವಣೆಗಳ ಮೂಲಕ ಇದು ನಡೆಯುತ್ತದೆ. |
ಫೈಬರ್ – ಕರುಳಿಗೆ ಉತ್ತಮ
ಇತ್ತೀಚೆಗೆ ಎಲ್ಲರೂ ಕೆಲ ಒಳ್ಳೆಯ ಕಾರಣಗಳಿಗಾಗಿ ಕರುಳಿನ ಬ್ಯಾಕ್ಟೀರಿಯಾ ಮತ್ತು ಪ್ರೊಬಯೋಟಿಕ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರೊಬಯೋಟಿಕ್ಸ್ ಅಂದರೆ ಒಳ್ಳೆಯ ಬ್ಯಾಕ್ಟೀರಿಯಾಗಳು. ಇವು ಹಲವು ರೋಗಗಳಿಗೆ ಕಾರಣವಾಗುವ ಕೆಟ್ಟ ಬ್ಯಾಕ್ಟೀರಿಯಾಗಳಿಂದ ನಮ್ಮ ಕರುಳನ್ನು ರಕ್ಷಿಸುತ್ತವೆ.
ಅಂದರೆ, ಪ್ರೊಬಯೋಟಿಕ್ಸ್ ನಮ್ಮ ಕರುಳಿನ ಆರೋಗ್ಯವನ್ನು ನೋಡಿಕೊಳ್ಳುತ್ತದೆ. ಹಾಗಾದರೆ ಈಗಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಸರಿಯಾಗಿ ಪೋಷಣೆ ಮಾಡಬೇಕು. ಹೇಗೆ? ಇಲ್ಲಿ ಕೇಳಿ. ನಾರಿನಂಶ ಅಧಿಕವಿರುವ ಆಹಾರಗಳ ಮೂಲಕ.
ಫೈಬರ್ ಕೂಡ ಆಹಾರ. ಇದು ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಪ್ರಿಬಯೋಟಿಕ್ಸ್ ಎಂದು ಕರೆಯಲ್ಪಡುತ್ತದೆ. ನಮ್ಮ ಕರುಳಿನ ಒಳ್ಳೆಯ ಮೈಕ್ರೋಬುಗಳು ಈ ಕೊಳೆಯುವ ನಾರುಗಳಿಂದ ಸಿಗುವ ಅಧಿಕ ಶಕ್ತಿ, ಪೋಷಕಾಂಶ ಮತ್ತು ವಿಟಮಿನ್ನುಗಳನ್ನು ಹೀರಿಕೊಂಡು ರೋಗ ಹರಡುವ ಕೆಟ್ಟ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುತ್ತವೆ. ಇವುಗಳನ್ನು ಸರಿಯಾಗಿ ಪೋಷಿಸದಿದ್ದರೆ ಇವು ಕರುಳಿನ ರಕ್ಷಣಾತ್ಮಕ ಪದರವನ್ನು ಕೊರೆಯಲು ಶುರು ಮಾಡುತ್ತವೆ. ಇದು ಒಳ್ಳೆಯ ವಿಷಯವಂತೂ ಅಲ್ಲವೇ ಅಲ್ಲ. ಯಾಕೆಂದರೆ ನಮ್ಮ ದೇಶ ಶೇಕಡಾ 70 ಭಾಗ ಪ್ರತೊರೋಧಕ ಕೋಶಗಳು ಇರುವುದು ಕರುಳಿನ ಈ ಪದರಗಳಲ್ಲಿ. ಆರೋಗ್ಯವಂತ ಕರುಳು ಅಂದರೆ ಅಧಿಕ ರೋಗ ನಿರೋಧಕ ಶಕ್ತಿ.
ಕುತೂಹಲಕಾರಿ ಸಂಗತಿ: ಒಳ್ಳೆಯ ಬ್ಯಾಕ್ಟೀರಿಯಾಗಳು ನಾರುಗಳನ್ನು ಅವಲಂಬಿಸಿವೆ ಮತ್ತು ಅವು ನಾರುಗಳನ್ನೇ ಬೇಡುತ್ತವೆ. ಕೆಟ್ಟ ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ಅವಲಂಬಿಸಿವೆ ಮತ್ತು ಹೆಚ್ಚಿನ ಸಕ್ಕರೆಯನ್ನು ಬೇಡುತ್ತವೆ. ಆದ್ದರಿಂದ ಕೆಟ್ಟವುಗಳಿಗೆ ಆಹಾರ ನೀಡಿದರೆ, ನಿಮ್ಮ ಸಕ್ಕರೆಯ ಮೋಹ ಹೆಚ್ಚಾಗುತ್ತದೆ. ಆದರೆ ನೀವು ಒಳ್ಳೆಯ ಸೂಕ್ಷ್ಮಾಣುಜೀವಿಗಳನ್ನು ಪೋಷಿಸಿದರೆ ನಿಮ್ಮ ಮೆದುಳು ಒಳ್ಳೆಯದನ್ನೇ ಕೇಳುತ್ತದೆ. ಆದ್ದರಿಂದ ಏನು ಮಾಡಬೇಕೆಂದು ನೀವೇ ನಿರ್ಧರಿಸಿ! |
ಒಂದು ದಿನದಲ್ಲಿ ಎಷ್ಟು ಪ್ರಮಾಣದ ಫೈಬರ್ ಸೇವಿಸಬೇಕು?
ಸರಿಯಾದ ಪ್ರಮಾಣವು ಲಿಂಗ ಮತ್ತು ವಯಸ್ಸಿನ ಮೇಲೆ ಅವಲಂಬಿಸಿರುತ್ತದೆ. ಆದರೆ ಒಂದು ಅಂದಾಜು ಪ್ರಕಾರ, ವಯಸ್ಕರಿಗೆ ದಿನಕ್ಕೆ ಸುಮಾರು 20 ರಿಂದ 35 ಗ್ರಾಂ ಬೇಕಾಗುತ್ತದೆ. ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಅವುಗಳ ಮೇಲಿರುವ ಲೇಬಲ್ ನೋಡಿಕೊಂಡು ಫೈಬರ್ ಪ್ರಮಾಣವನ್ನು ನಿರ್ಣಯಿಸಿರಿ.
ನಮ್ಮ ಆಹಾರದಲ್ಲಿ ನಾರಿನಂಶವನ್ನು ಹೇಗೆ ಸೇರಿಸಬಹುದು?
ನಾರಿನಂಶ ಸಮೃದ್ಧವಾಗಿರುವ ಆಹಾರಕ್ಕಾಗಿ ನೀವು ಮನೆ ಬಿಟ್ಟು ದೂರ ಎಲ್ಲೂ ಹೋಗಬೇಕಿಲ್ಲ. ನಮ್ಮ ಅಜ್ಜಿಯಂದಿರಿಗೆ ಇದರ ಬಗ್ಗೆ ಖಚಿತ ತಿಳುವಳಿಕೆ ಇತ್ತು. ಅವರು ಹಣ್ಣು, ತರಕಾರಿ, ಕಾಳುಗಳು, ಬೀಜಗಳು, ಧಾನ್ಯಗಳ ಮೂಲಕ ನಮಗೆ ಬೇಕಾದ ನಾರಿನಂಶವನ್ನು ನೀಡುತ್ತಿದ್ದರು.
ನಾರುಗಳನ್ನು ಆಹಾರದಲ್ಲಿ ಹೇಗೆಲ್ಲ ಸೇರಿಸಬಹುದು ಎಂಬುದಕ್ಕೆ ಕೆಲವು ಟಿಪ್ಸ್:
- ತಾಜಾ ಹಣ್ಣುಗಳು ಮತ್ತು ತರಕಾರಿಗಳು. ಈಗ ನಮಗೆಲ್ಲ ಇದನ್ನು ದೈನಂದಿನ ಆಹಾರದಲ್ಲಿ ಸೇವಿಸುವುದರಿಂದ ಉಂಟಾಗುವ ಅರೋಗ್ಯ ಲಾಭಗಳ ಬಗ್ಗೆ ತಿಳಿದಿದೆ. ಸಾಧ್ಯವಾದಷ್ಟೂ ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಸೇವಿಸಿ.
- ಪೂರ್ಣ ಧಾನ್ಯಗಳು ಸಂಸ್ಕರಿಸಿದ ಧಾನ್ಯಗಳಿಗಿಂತ ಉತ್ತಮ. ಈಗ ರುಚಿಕರವಾದ ಹಲವು ಅಕ್ಕಿ ತಳಿಗಳು ಲಭ್ಯವಿದೆ. ಹಾಗಾದರೆ ಗುಂಪಿನಲ್ಲಿ ನೀವು ಕೂಡ ಬಿಳಿ ಅಕ್ಕಿಯನ್ನೇ ಯಾಕೆ ಆಯ್ದುಕೊಳ್ಳುತ್ತಿದ್ದೀರಿ?
- ಸಿರಿಧಾನ್ಯಗಳು, ಸಾಂಪ್ರದಾಯಿಕ ಧಾನ್ಯಗಳು. ಇವುಗಳನ್ನು ನಮ್ಮ ಹಿರೀಕರು ಶತಮಾನಗಳ ಕಾಲ ಸೇವಿಸುತ್ತಿದ್ದರು. ಇವು ನಾರುಗಳ ಉತ್ತಮ ಮೂಲ, ಜೊತೆಗೆ ಪೋಷಕಾಂಶಗಳಾದ ಪ್ರೊಟೀನ್, ವಿಟಮಿನ್ ಮತ್ತು ಖನಿಜಾಂಶಗಳು ಕೂಡ ಹೇರಳವಾಗಿವೆ. ಇವುಗಳಲ್ಲಿ 9 ವಿಧಗಳಿವೆ, ನವಧಾನ್ಯಗಳು. ಇವುಗಳಲ್ಲಿ ಸಜ್ಜೆ, ರಾಗಿ ಮತ್ತು ಜೋವರ್ ತರದ ಜನಪ್ರಿಯ ಧಾನ್ಯಗಳೂ, ಬರಗು ಮತ್ತು ಹಾರಕ ತರದ ಸಣ್ಣ ಧಾನ್ಯಗಳೂ ಸೇರಿವೆ. ನಿಮಗೆ ಹೊಸ ಪರೀಕ್ಷೆಗಳಿಗೆ ಬೇಕಾದಷ್ಟು ಇಲ್ಲೇ ಸಿಕ್ಕಿತಲ್ಲ.
- ಕಾಳುಗಳು ಮತ್ತು ಬೀಜಗಳು. ಬಾದಾಮಿ, ಕಡಲೆ, ಅಗಸೆ, ಚಿಯಾ, ಬೇಸಿಲ್ ಮೊದಲಾದ ಎಲ್ಲ ಕಾಳುಗಳು ಮತ್ತು ಬೀಜಗಳು ನಾರಿನಂಶ ಮತ್ತು ಒಮೇಗಾ 3 ಕೊಬ್ಬುಗಳ ಸಂಪನ್ನ ಮೂಲಗಳು.
ಮತ್ತೆ, ನಿಜಕ್ಕೂ ನಮ್ಮ ಆಹಾರದಲ್ಲಿ ಫೈಬರ್ ಸೇರಿಸುವುದು ಹೇಗೆ!
ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಲು, ನಿಮ್ಮ ಇಷ್ಟದ ಅಡುಗೆಯನ್ನು ಆಯ್ದುಕೊಂಡು ಅದರಲ್ಲಿ ಈ ಸಾಮಗ್ರಿಗಳನ್ನು ಸೇರಿಸಲು ಪ್ರಯತ್ನಿಸಿ. ಇವು ಹಲವಾರು ರೀತಿಯ ಅಡುಗೆಗಳಿಗೆ ಸುಲಭದಲ್ಲಿ ಹೊಂದಿಕೊಳ್ಳುತ್ತವೆ.
ಹೇಗೆ ಇದನ್ನು ಮಾಡಬಹುದು ಎಂಬುದರ ಬಗ್ಗೆ ಕೆಲವು ಐಡಿಯಾಗಳು:
- ನಾರಿನಂಶ ಅಧಿಕವಿರುವ ಧಾನ್ಯಗಳು: ಸಿರಿಧಾನ್ಯಗಳು ಅಥವಾ ಕಾರ್ನ್ ಫ್ಲೆಕ್ಸ್ ಜೊತೆಗೆ ದಿನ ಆರಂಭಿಸಿರಿ. ಇವು ಕಡಿಮೆ ಸಂಸ್ಕರಿಸಿದ ಮತ್ತು ಸಕ್ಕರೆ ಸೇರಿಸಿದ ಆಹಾರಗಳು ಎಂಬುದನ್ನು ಖಾತ್ರಿಪಡಿಸಿ. ಬೇಕಿದ್ದರೆ ಇದಕ್ಕೆ ಸ್ವಲ್ಪ ಒಣ ದ್ರಾಕ್ಷಿ ಸೇರಿಸಿ ಸಿಹಿಯಾಗಿಸಿ.
- ಸಂಸ್ಕರಿಸಿದ ಧಾನ್ಯಗಳಿಗೆ ಬದಲಾಗಿ ಪೂರ್ಣ ಧಾನ್ಯಗಳನ್ನು ಬಳಸಿ: ಸಿರಿಧಾನ್ಯಗಳು ನಿಜವಾದ ನಾರಿನಂಶ ಇರುವ ಆಹಾರಗಳು. ದಿನದ ಒಂದು ಊಟದಲ್ಲಾದರೂ ನಿಮಗೆ ಅಕ್ಕಿಯ ಬದಲಿಗೆ ಸಿರಿಧಾನ್ಯವನ್ನು ಬಳಸಿರಿ. ಅಕ್ಕಿಯೇ ಬೇಕೆಂದಾದಲ್ಲಿ ಕಡಿಮೆ ಸಂಸ್ಕರಿಸಿದ ಕೆಂಪಕ್ಕಿ, ಕಂದು ಅಕ್ಕಿ ಅಥವಾ ಕಪ್ಪಕ್ಕಿ ಪ್ರಯತ್ನಿಸಿ.
- ರೊಟ್ಟಿ ಮತ್ತು ಚಪಾತಿಯಲ್ಲಿ ಪೂರ್ಣ ಧನ್ಯ ಸೇರಿಸಿ: ರಾಗಿ, ಜೋವರ್, ಸಜ್ಜೆ ಅಥವಾ ಮಿಶ್ರ ಸಿರಿಧಾನ್ಯ ಹಿಟ್ಟನ್ನು ಸೇರಿಸಿ ನಿಮ್ಮ ಸಾದಾ ಆಟ್ಟದಲ್ಲಿ ನಾರಿನಂಶ ಹೆಚ್ಚಿಸಿ. ಸಿರಿಧಾನ್ಯಗಳು ಗ್ಲುಟೆನ್ ಮುಕ್ತವಾಗಿರುವುದರಿಂದ ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಸೇರಿಸಿ, ಇಲ್ಲದಿದ್ದರೆ ಚಪಾತಿ ಒರಟಾಗಿ ತೋರಬಹುದು. ನಿಧಾನಕ್ಕೆ ನೀವು ಇದರ ಪೂರ್ಣ ರುಚಿಯನ್ನು ಅನುಭವಿಸುತ್ತ ಬಂದಂತೆ ಇದರ ಪ್ರಮಾಣವನ್ನು ಹೆಚ್ಚಿಸುವ ದಾರಿಯನ್ನೂ ಕಂಡುಕೊಳ್ಳುತ್ತೀರಿ.
ಇನ್ನಷ್ಟು ಐಡಿಯಾಗಳು:
- ಅಗಸೆ ಬೀಜ ಹುರಿದು ಪುಡಿ ಮಾಡಿ ತೆಗೆದಿಟ್ಟುಕೊಳ್ಳಿ. ಇದನ್ನು ಬ್ರೇಕ್ ಫಾಸ್ಟ್ ಸೀರಿಯಲ್, ಸಲಾಡ್ ಅಥವಾ ಮೊಸರು, ಬೇಕ್ ಮಾಡಿದ ತಿಂಡಿಗಳು, ಅಥವಾ ದೋಸೆ ಮತ್ತು ಇಡ್ಲಿಗೆ ಸೇವಿಸುವ ಚಟ್ನಿ ಪುಡಿಗೆ ಕೂಡ ಸೇರಿಸಬಹುದು.
- ಬಾದಾಮಿ, ಕಡಲೆ, ಅಗಸೆ, ಚಿಯಾ, ಬೇಸಿಲ್ ಮೊದಲಾದವು ನಿಮ್ಮ ಆಹಾರದ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿ. ಇವುಗಳನ್ನು ಹುರಿದು ಪುಡಿಮಾಡಿಟ್ಟುಕೊಂಡು ಸಲಾಡ್, ಬೇಯಿಸಿದ ತರಕಾರಿಗಳಿಗೆ ಸೇರಿಸುವ ಮೂಲಕ ರುಚಿ ಮತ್ತು ವಿಟಮಿನ್ ಎರಡನ್ನೂ ಪಡೆಯಬಹುದು.
- ಬ್ರೆಡ್ ಮತ್ತು ಬಿಸ್ಕಟ್ ಸಾಮಾನ್ಯವಾಗಿ ಸಂಸ್ಕರಿಸಿದ ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಇವುಗಳನ್ನು ನಿಮ್ಮ ಆಹಾರದಿಂದ ಸಂಪೂರ್ಣವಾಗಿ ತೆಗೆದು ಹಾಕಬೇಕಾದ ಅಗತ್ಯವಿಲ್ಲ. ಬದಲಿಗೆ ಪೂರ್ಣ ಧಾನ್ಯ ಮತ್ತು ಮಿಶ್ರ ಸಿರಿಧಾನ್ಯಗಳಿಂದ ಮಾಡಿದ ಬ್ರೆಡ್ ಮತ್ತು ಬಿಸ್ಕಟ್ ಆಯ್ದುಕೊಳ್ಳಿ.
ಇವುಗಳನ್ನೆಲ್ಲ ಇಮ್ಮೆ ಪ್ರಯತ್ನಿಸಿ ನೋಡಿ. ನಿಮ್ಮ ಕರುಳು ಸದಾ ನಿಮಗೆ ಋಣಿಯಾಗಿರಬಹುದು. ನಿಮ್ಮ ನಾಲಗೆಯೂ ನಿಮಗೆ ಧನ್ಯವಾದ ಹೇಳಬಹುದು!
ಶಾಸನಬದ್ಧ ಎಚ್ಚರಿಕೆ: ಉಳಿದೆಲ್ಲವುಗಳ ಹಾಗೆ , ನಾರುಗಳನ್ನು ಕೂಡ ಹದ ಪ್ರಮಾಣದಲ್ಲಿಯೇ ತೆಗೆದುಕೊಳ್ಳಬೇಕು. ಮತ್ತು ನಾರಿನಂಶದ ಪ್ರಮಾಣ ಹೆಚ್ಚಿಸುವಾಗ ನಿಧಾನಕ್ಕೆ ಹೆಚ್ಚಿಸುತ್ತಾ ಹೋಗಬೇಕು. ಇಲ್ಲದಿದ್ದರೆ ಗ್ಯಾಸ್ ಮತ್ತು ಹೊಟ್ಟೆಯುಬ್ಬರದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಫೈಬರ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದರೆ ಶಿಫಾರಸ್ಸು ಮಾಡಿದಷ್ಟು ಪ್ರಮಾಣದ ನೀರನ್ನು ಕುಡಿಯಿರಿ.
ಪ್ರತಿಕ್ರಿಯೆಗಳಿಗೆ ಸ್ವಾಗತ. ನಾರಿನಂಶ ಅಧಿಕವಿರುವ ಆಹಾರದ ಬಗ್ಗೆ ನಿಮ್ಮ ಐಡಿಯಾಗಳನ್ನೂ ಅಭಿಪ್ರಾಯಗಳನ್ನೂ ಕೆಳಗೆ ಪೋಸ್ಟ್ ಮಾಡಿ.