ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳಗಳಲ್ಲಿ ಸೇವೆ ಸಲ್ಲಿಸಬೇಕೆಂದು ವೈದ್ಯರ ಬಳಿ ಹೇಳಿದರೆ ಹೇಗಿರಬಹುದು? ಡೇವಿಡ್ ನಾಟ್ ಅವರನ್ನು ಕೇಳಿದರೆ ಅವರು ಹೀಗೆ ಹೇಳುತ್ತಾರೆ, ‘ಇದು ಮಾನವೀಯತೆಯ ವಿಷಯ. ಯುದ್ಧ ಮತ್ತು ಅದರ ಆರ್ತನಾದದ ನಡುವೆ ನರಳುವವರಿಗಾಗಿ ಆತ ಸೇವೆ ಸಲ್ಲಿಸಬೇಕು.’ ನಾಟ್ ಅವರ ಹೊಸ ಪುಸ್ತಕ ಯುದ್ಧ ವೈದ್ಯರು (ವಾರ್ ಡಾಕ್ಟರ್) ಯುದ್ಧದಿಂದ ಛಿದ್ರಗೊಂಡ ಸಾರಾಜೆವೊದಿಂದ ಭಯಾನಕ ಅಲೆಪ್ಪೊವರೆಗಿನ ಅತ್ಯಂತ ಅಪಾಯಕಾರಿ ಯುದ್ಧ ವಲಯಗಳಲ್ಲಿ ಹೇಗೆ ಕೆಲಸ ಮಾಡುವುದು ಎಂಬುದರ ಕುರಿತು ವಿವರಿಸುತ್ತದೆ.
ಲಂಡನ್ನ ಇಂಪೀರಿಯಲ್ ಕಾಲೇಜಿನ ಸರ್ಜನ್ ಮತ್ತು ಸರ್ಜರಿ ಪ್ರಾಧ್ಯಾಪಕ ನಾಟ್ ಕಳೆದ 25 ವರ್ಷಗಳಿಂದ ಯುದ್ಧ ಪೀಡಿತ ಸ್ಥಳಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುವ ಸಲುವಾಗಿ ರಜೆ ಪಡೆದುಕೊಂಡಿದ್ದಾರೆ. ವಾರ್ ಡಾಕ್ಟರ್ ಓದುಗರಿಗೆ ಅವರ ಕೆಲಸದ ಬಗ್ಗೆ ಆಡಂಬರವಿಲ್ಲದ, ನಿಸ್ವಾರ್ಥವಾದ ವಿವರಗಳನ್ನು ಮತ್ತು ಅವರ ಕೆಲಸದ ಹಿಂದಿನ ಕಾರಣವನ್ನು ಹೇಳುತ್ತದೆ.
ಸಿರಿಯಾದ ಯುದ್ಧ ಮತ್ತು ಬದುಕಿನ ನಡುವೆ ಚಿಂದಿಯಾಗಿದ್ದ ಜನರಿಗೆ ಚಿಕಿತ್ಸೆ ನೀಡಲು ಹೊರಡಬೇಕೆಂದು ಮೊದಲ ಬಾರಿ ಹೇಗೆ ಕೇಳಲಾಯಿತು ಎಂಬುದನ್ನು ವಿವರಿಸುವ ಮೂಲಕ ಅವರು ಪುಸ್ತಕವನ್ನು ಪ್ರಾರಂಭಿಸುತ್ತಾರೆ. ನಂತರದ ಅಧ್ಯಾಯಗಳು ನಮ್ಮನ್ನು ಹಿಡಿದಿರಿಸಿ ಓದಿಸುತ್ತವೆ. ಓದಿ ಮುಗಿಸಿದ ನಂತರವೂ ಬಹಳ ಸಮಯ ಇದು ಕಾಡುತ್ತದೆ. ಹಲವು ಕಡೆ ನೋವಿನ ನಡುವೆ ಓದು ಮುಂದುವರಿದಂತೆ ಇದು ಮಾನವೀಯ ಮತ್ತು ಹೃದಯ ಮಿಡಿಯುವ ಪುಸ್ತಕ ಎಂಬುದು ಸಾರಿ ಹೇಳುತ್ತದೆ.
ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ ಮತ್ತು ಇಂಟರ್ನ್ಯಾಷನಲ್ ರೆಡ್ ಕ್ರಾಸ್ ತರದ ಅಂತರಾಷ್ಟ್ರೀಯ ಸಂಘಟನೆಗಳು ಈ ಪ್ರದೇಶಗಳಲ್ಲಿ ಹೇಗೆ ಉದಾರವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆಯೂ ವಾರ್ ಡಾಕ್ಟರ್ ಒಳನೋಟವನ್ನು ನೀಡುತ್ತದೆ.
ವಾರ್ ಡಾಕ್ಟರ್ ಮೂಲಕ ಮಾನವೀಯ ಕಾರ್ಯದ ಸಾರವನ್ನು ಸೆರೆಹಿಡಿಯಲು ನಾಟ್ ಇಲ್ಲಿ ಯಶಸ್ವಿಯಾಗಿ ಪ್ರಯತ್ನಿಸಿದ್ದಾರೆ. ಇದು ಕಾಬೂಲ್, ಸಿರಿಯಾ ಮತ್ತು ಅಲೆಪ್ಪೊದಲ್ಲಿ ಏನೆಲ್ಲಾ ನಡೆದವು ಎಂಬುದರ ವಿವರವಾದ ವಿಶ್ಲೇಷಣೆಯನ್ನು ನೀಡುತ್ತದೆ. ಇದು ಬಹುವಾಗಿ ಮೊದಲ ವ್ಯಕ್ತಿ ನಿರೂಪಣೆಯಾಗಿದೆ. ಮಾನವೀಯತೆಯು ಉಸಿರಾಡುತ್ತಿದೆ ಮತ್ತು ಅದರ ಪರಿವರ್ತಕ ಶಕ್ತಿಯು ಈ ದುಃಖದಿಂದ ಬಳಲುತ್ತಿರುವ ಜಗತ್ತಿನಲ್ಲಿ ಅದ್ಭುತಗಳನ್ನು ಹೇಗೆ ಸೃಷ್ಟಿಸುತ್ತದೆ ಎಂಬುದರ ಕುರಿತು ಪುಸ್ತಕವು ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ.