ಇತ್ತೀಚೆಗೆ ಕಿರಾಣಿ ಅಂಗಡಿಗಳಲ್ಲಿ ಸಾವಯವ ಆಹಾರ ಪದಾರ್ಥಗಳು ಸಾಕಷ್ಟು ಗಮನ ಸೆಳೆಯುತ್ತಿವೆ. ಕಲಬೆರಕೆಯ ಬಗ್ಗೆ ಬರುತ್ತಿರುವ ಸುದ್ದಿಗಳು, ತಳಿ ಮಾರ್ಪಾಡು ಮಾಡಲಾದ ಆಹಾರಗಳು ನಮ್ಮ ಆರೋಗ್ಯದಲ್ಲಿ ಬೀರುವ ಕೆಟ್ಟ ಪರಿಣಾಮಗಳ ಬಗೆಗಿನ ಭಯ, ಭೂಮಿಯು ರಾಸಾಯನಿಕ ಕೀಟನಾಶಕಗಳು ಮತ್ತು ರಸಗೊಬ್ಬರಗಳಿಗೆ ಬಲಿಯಾಗುತ್ತಾ ಭಾರತೀಯ ರೈತರು ಪಡುತ್ತಿರುವ ಸಂಕಷ್ಟ… ಜೀಗೆ ಜನರು ಹಲವು ಕಾರಣಗಳನ್ನು ನೀಡುತ್ತಾ ತಮ್ಮ ಆಯ್ಕೆಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಸಾವಯವ ಆಹಾರಗಳ ನಿಜವಾದ ಪ್ರಯೋಜನಗಳೇನು?
ಸಾವಯವ ಆಹಾರದ ಆರಂಭ
ಆರಂಭದಲ್ಲಿ, ಸಾವಯವ ಆಹಾರವನ್ನು ಸ್ಥಳೀಯ ಸಣ್ಣ ರೈತರು ಮತ್ತು ಮನೆ ತೋಟಗಾರರು ತಮ್ಮ ಬಳಕೆಗಾಗಿ ಮಾತ್ರ ಬೆಳೆಯುತ್ತಿದ್ದರು. ಆದರೆ ಇಂದು ಸಾವಯವ ಮಾರುಕಟ್ಟೆಯು ಸಣ್ಣ ಮತ್ತು ದೊಡ್ಡ ಆಹಾರ ಉತ್ಪಾದಕರು ಹಾಗೂ ವಿತರಕರ ಸಂಕೀರ್ಣ ವ್ಯವಸ್ಥೆಯಾಗಿ ಬದಲಾಗಿದೆ. ಮೊದಲಿಗೆ ಹಣ್ಣುಗಳು, ತರಕಾರಿಗಳು, ಮಾಂಸ, ಡೈರಿಯೊಂದಿಗೆ ಪ್ರಾರಂಭವಾದ ಸಾವಯವ ಉತ್ಪಾದನೆ ಈಗ ಸಂಸ್ಕರಿಸಿದ ಆಹಾರಗಳಿಗೂ ವಿಸ್ತರಿಸಿದೆ.
ನಿರಂತರವಾಗಿ ವಿಕಾಸಗೊಳ್ಳುತ್ತಿರುವ ಜೀವನ ವಿಧಾನ ಮತ್ತು ಹೆಚ್ಚುತ್ತಿರುವ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಕಾರಣ, ಗ್ರಾಹಕರು ಚಿಕಿತ್ಸಾ ವಿಧಾನದ ಬದಲಾಗಿ ರೋಗ ತಡೆಗಟ್ಟುವ ಜೀವನಶೈಲಿಯ ಕಡೆಗೆ ಉತ್ಸಾಹವನ್ನು ತೋರಿಸುತ್ತಿದ್ದಾರೆ. ಆರಂಭದಲ್ಲಿ ಸಾವಯವವನ್ನು ರಾಸಾಯನಿಕ ಮುಕ್ತ, ಜೀವಜಾಲ ಸ್ನೇಹಿ ಆಹಾರವಾಗಿ ಮಾತ್ರ ನೋಡಲಾಗುತ್ತಿತ್ತು. ಆಗೆಲ್ಲಇದು ‘ಟ್ರೆಂಡಿ’ ಎಂದು ಪರಿಗಣಿಸಲ್ಪಟ್ಟಿರಲಿಲ್ಲ, ಇದು ಇತ್ತೀಚಿನ ಬೆಳವಣಿಗೆ. ಈಗೆಲ್ಲ ಸಾವಯವ ಆಯ್ಕೆಯನ್ನು ಫ್ಯಾಶನ್ ಎಂದು ಪರಿಗಣಿಸಲಾಗುತ್ತದೆ. ಹಾಗಂತ ಅದಕ್ಕೆ ಹೊಸತಲೆಮಾರನ್ನು ದೂಷಿಸಲಾದೀತೆ?
ಆದಾಗ್ಯೂ, ಸಾವಯವ ಆಹಾರವು ಆಹಾರ ಪದ್ಧತಿಗಿಂತ ಹೆಚ್ಚಾಗಿದೆ. ಸಾವಯವಕ್ಕೆ ಹೋಗುವುದರೊಂದಿಗೆ ಅಸಂಖ್ಯಾತ ಪ್ರಯೋಜನಗಳಿವೆ.
ಏನೇ ಆಗಲಿ, ಸಾವಯವ ಆಹಾರ ಪದ್ದತಿಯು ಬರಿಯ ಡಯಟ್ ಗದ್ದಲವಂತು ಅಲ್ಲವೇ ಅಲ್ಲ. ಸಾವಯವ ಆಹಾರ ಪದ್ದತಿಯಲ್ಲಿ ಅಸಂಖ್ಯಾತ ಪ್ರಯೋಜನಗಳಿವೆ.
ಪ್ರಕೃತಿಯನ್ನು ಅದರ ಪಾಡಿಗೆ ಬಿಡಿ: ಸಾವಯವ ಆಹಾರ ಪದ್ದತಿಯು ಪರಿಸರ ಸಂರಕ್ಷಣೆಗೆ ಹೇಗೆ ಸಹಾಯ ಮಾಡುತ್ತದೆ
ಸಾವಯವ ಕೃಷಿಯು ಪ್ರಕೃತಿಯ ನೀತಿನಿಯಮಗಳು ಮತ್ತು ಭೂಮಿಯನ್ನು ಪೋಷಿಸುವ ಸಾಮರ್ಥ್ಯವನ್ನು ಆಧರಿಸಿದೆ. ಈ ಪದ್ದತಿಯು ವ್ಯಾಪಕವಾದ ಆಧುನಿಕ ಕೃಷಿ ವಿಧಾನಗಳು ಮತ್ತು ಪರಂಪರಾಗತ ಬೆಳೆಗಳ ಸಮತೋಲನವನ್ನು ಬದಲಿಸುವ ಮಾನವ ಹಸ್ತಕ್ಷೇಪದಿಂದ ಮುಕ್ತವಾಗಿದೆ.
ಕೃಷಿಯನ್ನು ನಾಶ ಮಾಡುವ ಕೀಟಗಳಿಂದ ರಕ್ಷಣೆಗೆ ರಸಗೊಬ್ಬರಗಳು ಅತ್ಯವಶ್ಯಕವೆಂದು ವೈಜ್ಞಾನಿಕ ವಿಧಾನಗಳ ಪ್ರತಿಪಾದಕರು ದೀರ್ಘ ಕಾಲದಿಂದ ಪ್ರತಿಪಾದಿಸುತ್ತಲೇ ಬಂದರು. ರೈತರು ಅದನ್ನು ನಂಬಿಯೂ ಬಿಟ್ಟರು. ಅದಾಗ್ಯೂ ಮಾನವನಿಗೆ ಅನುಕೂಲಕರ ಪರಿಸರವನ್ನು ನಿರ್ಮಿಸುವ ಇಂತಹ ಪ್ರಯತ್ನಗಳು ವಾಸ್ತವವಾಗಿ ವಿನಾಶಕಾರಿ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ನಿಜದಲ್ಲಿ ಒಂದು ಬೆಳೆ ಅಥವಾ ಗಿಡವು ಅದರ ನೈಸರ್ಗಿಕ ಆವಾಸ ಸ್ಥಾನದಲ್ಲಿ ಉತ್ತಮವಾಗಿ ಬೆಳೆಯುತ್ತದೆ.
ಮನುಷ್ಯ ತನ್ನ ಬೆರಳೆತ್ತದೆಯೂ ಮಣ್ಣು ವರ್ಷದಿಂದ ವರ್ಷಕ್ಕೆ ಸಮೃದ್ಧವಾಗುತ್ತದೆ. ಮತ್ತೊಂದೆಡೆ, ಕೀಟನಾಶಕಗಳು ಮಣ್ಣನ್ನು ಹಾಳುಮಾಡುತ್ತವೆ ಮತ್ತು ಮಾಲಿನ್ಯ ಸಮಸ್ಯೆಯನ್ನು ಸೃಷ್ಟಿಸುತ್ತವೆ. ಪ್ರಕೃತಿ ನೀಡುವ ಗುಣಮಟ್ಟದ ಆಹಾರದ ಮುಂದೆ ವಿಜ್ಞಾನವು ಸೋಲುತ್ತದೆ. ವಿಜ್ಞಾನವು ಸಂಶ್ಲೇಷಿತ ಆಹಾರ ಉತ್ಪನ್ನಗಳನ್ನು ತಯಾರಿಸಲು ಮಾತ್ರ ಯಶಸ್ವಿಯಾಗಿದೆ.
ಬೆಳೆಗಳಿಗೆ ವಿಷಕಾರಿ ಕೀಟನಾಶಕಗಳನ್ನು ಬಳಸುವುದರಿಂದ ಜೇನುನೊಣಗಳಂತಹ ಪರಾಗಸ್ಪರ್ಶ ಮಾಡುವ ಕೀಟಗಳು ನಾಶವಾಗುತ್ತವೆ. ಆ ಮೂಲಕ ಮನುಷ್ಯನೇ ಹೂವುಗಳನ್ನು ಕೃತಕವಾಗಿ ಪರಾಗಸ್ಪರ್ಶ ಮಾಡುವಂತೆ ಒತ್ತಾಯಿಸುತ್ತದೆ. ಕೃಷಿ-ಪರಿಸರ ವ್ಯವಸ್ಥೆಯಲ್ಲಿ ಪೋಷಕಾಂಶ ಮತ್ತು ಶಕ್ತಿಯ ಹರಿವು, ಹವಾಮಾನ ಬದಲಾವಣೆಯನ್ನು ತಗ್ಗಿಸುವ ಮತ್ತು ಅದಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಪರಿಗಣಿಸಿ FAO ಸಾವಯವ ಕೃಷಿಯನ್ನು ಉತ್ತೇಜಿಸುತ್ತದೆ.
ಸಾವಯವ ಆಹಾರವನ್ನು ಆರಿಸುವುದು ಪರಿಸರ ಸಂರಕ್ಷಣೆಯ ಮೊದಲ ಹೆಜ್ಜೆ.
ಸಾವಯವ ಆಹಾರದ ತುರ್ತು ಯಾಕಿದೆ?
ಇಳಿವರಿ ಸುಧಾರಿಸುವ ಸಲುವಾಗಿ ಕೃಷಿಯಲ್ಲಿ ರಸಗೊಬ್ಬರಗಳು ಮತ್ತು ಕೀಟನಾಶಕಗಳ ವ್ಯಾಪಕ ಬಳಕೆ ಇರುವುದರಿಂದ ಸಾವಯವ ಉತ್ಪನ್ನಗಳ ಅವಶ್ಯಕತೆ ಹೆಚ್ಚಾಗಿದೆ. ಗ್ರಾಹಕರು ಆಹಾರ ಉತ್ಪನ್ನಗಳನ್ನು ಕುರುಡಾಗಿ ಅಯ್ದುಕೊಳ್ಳದಿರಲು ಕಲಬೆರಕೆ ಮತ್ತೊಂದು ಕಾರಣ.
ಸಾವಯವ ಉತ್ಪಾದನೆಯು ಪರಿಸರವನ್ನು ಗೌರವಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಸುಸ್ಥಿರವಾಗಿರುತ್ತದೆ.
ಸಾವಯವ ಮತ್ತು ಸಾಂಪ್ರದಾಯಿಕ ಉತ್ಪನ್ನಗಳು
ಸಾಂಪ್ರದಾಯಿಕ ಉತ್ಪನ್ನಗಳಿಗೆ ಹೋಲಿಸಿದರೆ ಸಾವಯವ ಆಹಾರಗಳು ಹೆಚ್ಚು ಸುರಕ್ಷಿತವೆಂದು ತೋರುತ್ತದೆ. ಸಾವಯವ ಕೃಷಿಯಲ್ಲಿ ಮಣ್ಣಿನ ಪೌಷ್ಠಿಕಾಂಶವನ್ನು ಉಳಿಸಿಕೊಳ್ಳಲು ಬೆಳೆ ಬದಲಾವಣೆಯ ನೈಸರ್ಗಿಕ ವಿಧಾನಗಳನ್ನು ಅನುಸರಿಸಲಾಗುತ್ತದೆ. ಇದರಿಂದ ಖಾಲಿಯಾದ ಪೋಷಕಾಂಶಗಳು ಮತ್ತೆ ಉತ್ಪತ್ತಿಯಾಗುತ್ತವೆ. ಇಲ್ಲಿ ಬೆಳೆಗಳು ಸ್ವಾವಲಂಬಿ ಪರಿಸರದಲ್ಲಿ ಬೆಳೆಯುತ್ತವೆ. ಉತ್ತಮ ಪೌಷ್ಠಿಕಾಂಶದೊಂದಿಗೆ ಅದು ನೈಜ ರೂಪದಲ್ಲಿ ದೊರೆಯುತ್ತದಾದ್ದರಿಂದ ನಮಗೆ ಅದರ ನೈಸರ್ಗಿಕ ಸಾರವನ್ನು ಗ್ರಹಿಸಲು ಸಾಧ್ಯವಾಗುತ್ತದೆ.
ಆಂಟಿಆಕ್ಸಿಡೆಂಟ್ಗಳು, ಫೀನಾಲಿಕ್ಸ್ ಮತ್ತು ಫ್ಲೇವನಾಯ್ಡ್ಗಳಂತಹ ಕೆಲವು ಪ್ರಮುಖ ವಿಷಯಗಳಲ್ಲಿ ಸಾವಯವ ಆಹಾರ ಮುಂದಿದೆ.
ಸಾಂಪ್ರದಾಯಿಕ ಉತ್ಪನ್ನಗಳಿಗಿಂತ ಸಾವಯವ ಉತ್ಪನ್ನಗಳಲ್ಲಿ ಪೌಷ್ಠಿಕಾಂಶದ ಮಹತ್ವವನ್ನು ಅಧ್ಯಯನಗಳು ತೋರಿಸುತ್ತವೆ. ಕೀಟಗಳು ಮತ್ತು ರೋಗಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಗಿಡಗಳಿಗೆ ಫಿನಾಲಿಕ್ಸ್ ಅವಶ್ಯ. ಜೊತೆಗೆ ಅದರ ಉತ್ಕರ್ಷಣ ನಿರೋಧಕ ಗುಣದಿಂದಾಗಿ ನಮ್ಮ ಆರೋಗ್ಯಕ್ಕೂ ಸಹಕಾರಿಯಾಗಿದೆ.
ಸಾವಯವ ಆಹಾರವನ್ನು ಬೆಳೆಯುವುದು, ನಿರ್ವಹಿಸುವುದು ಮತ್ತು ಸಂಸ್ಕರಿಸುವುದು ಸಾಂಪ್ರದಾಯಿಕ ಪದ್ದತಿಗಿಂತ ತೀರಾ ವಿಭಿನ್ನವಾಗಿ. ಇದು ಎಚ್ಚರಿಕೆಯಿಂದ, ಕ್ರಮಬದ್ಧವಾಗಿ ನಡೆಸುವ ಪ್ರಕ್ರಿಯೆ. ಏಕೆಂದರೆ ಸಾವಯವ ಆಹಾರಗಳು ಕಟ್ಟುನಿಟ್ಟಾದ ಪ್ರಮಾಣೀಕರಣ ಮಾನದಂಡಗಳನ್ನು ಪೂರೈಸಬೇಕಾದ ಅಗತ್ಯವಿದೆ. ಆದ್ದರಿಂದ ಸಾವಯವ ಆಹಾರವು ಹೆಚ್ಚು ವಿಶ್ವಾಸಾರ್ಹವಾಗಿದೆ.
ಅಭಿರುಚಿಯ ಪ್ರಶ್ನೆ
ರುಚಿ ಮತ್ತು ಸುವಾಸನೆಯ ವಿಷಯಕ್ಕೆ ಬಂದಾಗ ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನವಾದ ಆದ್ಯತೆಗಳು ಇರುತ್ತವೆ. ನಿಮ್ಮ ಆಹಾರವನ್ನು ನೀವೇ ಬೆಳೆಯದಿದ್ದರೆ ತಾಜಾ ತರಕಾರಿಗಳು ಮತ್ತು ಹಣ್ಣುಗಳು ನಿಜವಾಗಿಯೂ ಯಾವ ರುಚಿಯನ್ನು ಹೊಂದಿರುತ್ತವೆ ಎಂದು ನಿಮಗೆ ತಿಳಿಯುವುದು ಅಸಾಧ್ಯ. ಸಾಂಪ್ರದಾಯಿಕ ಅಥವಾ ವಾಣಿಜ್ಯ ಕೃಷಿಯಲ್ಲಿ ಗಾತ್ರ, ದೃಢತೆ, ಬಣ್ಣ ಮತ್ತು ಕೀಟಗಳಿಂದ ಪ್ರತಿರೋಧಗಳೆಂಬ ಹಲವು ವಿಷಯಗಳಲ್ಲಿ ರುಚಿಯೂ ಒಂದು.
ಹೇರಳ ಮತ್ತು ಅಗ್ಗದ ಪೂರೈಕೆ, ಹವಾಮಾನ ಅಥವಾ ಭೌಗೋಳಿಕ ಗಡಿಗಳ ಮಿತಿಯಿಲ್ಲದಿರುವಿಕೆ ಮೊದಲಾದ ಕೆಲವು ಪ್ರಯೋಜನಗಳು ವಾಣಿಜ್ಯ ಆಹಾರ ಪೂರೈಕೆಯಲ್ಲಿ ಇವೆಯಾದರೂ ಇದು ನೈಸರ್ಗಿಕ ರುಚಿ, ಪರಿಮಳಗಳ ಜೊತೆಗೆ ಹೊಂದಾಣಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಅತ್ಯಂತ ಕೆಟ್ಟ ಹೊಂದಾಣಿಕೆ ಎಂದರೆ ಪೌಷ್ಠಿಕಾಂಶ ಮತ್ತು ಜೀವವೈವಿಧ್ಯತೆ.
ಸಾವಯವ ಮತ್ತು ಆರೋಗ್ಯ
ಕೀಟನಾಶಕಗಳು ಮತ್ತು ಮಾಲಿನ್ಯಕಾರಕಗಳು ನಮ್ಮ ಊಟದ ತಟ್ಟೆ ಸೇರುವುದನ್ನು ತಪ್ಪಿಸಲು ಸಾವಯವವಾಗಿ ಬೆಳೆದ ಆಹಾರಗಳ ಸೇವನೆಯೇ ಉತ್ತಮ ಮಾರ್ಗ.
ಶಿಶುಗಳು, ಗರ್ಭಿಣಿಯರು, ಹಾಲುಣಿಸುವ ಮಹಿಳೆಯರು ಮತ್ತು ವಯಸ್ಸಾದ ವ್ಯಕ್ತಿಗಳಂತಹ ಸೂಕ್ಷ್ಮ ಜನರಿಗೆ ಸಾವಯವ ಆಹಾರವು ಬಹಳ ಉಪಯುಕ್ತ. ರೋಗನಿರೋಧಕ ವ್ಯವಸ್ಥೆಯು ಈಗ ತಾನೇ ರೂಪುಗೊಳ್ಳುತ್ತಿರುವ ಶಿಶುಗಳಿಗೆ ಮಾಲಿನ್ಯಕಾರಕಗಳನ್ನು ತಮ್ಮ ದೇಹದಿಂದ ಹೊರಹಾಕುವ ಶಕ್ತಿ ಇರುವುದಿಲ್ಲ. ಪರಿಣಾಮವಾಗಿ ನರಸಂಬಂಧಿ ಮತ್ತು ಸಂತಾನೋತ್ಪತ್ತಿ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಸಾವಯವವು ಕೇವಲ ಮತ್ತೊಂದು ಆಹಾರ ಪದ್ಧತಿಯಲ್ಲ – ಸಾವಯವ ಉತ್ಪನ್ನಗಳ ಬಳಕೆಯನ್ನು ತೂಕ ಇಳಿಕೆಯೊಂದಿಗೆ ಸಮೀಕರಿಸಲಾಗುವುದಿಲ್ಲ. ಸಾವಯವ ಆಯ್ಕೆಯು ಸಂಶ್ಲೇಷಿತ ರಾಸಾಯನಿಕಗಳ ಸೇವನೆಯನ್ನು ತಡೆಯುತ್ತದೆ. ವಿಶೇಷವಾಗಿ ಮಾಂಸದಲ್ಲಿ ಅವುಗಳನ್ನು ಹಾರ್ಮೋನುಗಳು ಮತ್ತು ಪ್ರತಿಜೀವಕಗಳಿಂದ ತುಂಬಿಸಲಾಗಿರುತ್ತದೆ.
ಸಾವಯವ ಪರಿಹಾರ
ಇತರ ಆಹಾರಗಳಂತೆ ಸಾವಯವ ಆಹಾರದಲ್ಲೂ ಒಂದಕ್ಕಿಂತ ಇನ್ನೊಂದರಲ್ಲಿ ಪೊಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ವೈವಿಶ್ಯತೆ ಇರುವ ಹಾಗೆ ನೋಡಿಕೊಳ್ಳಿ. ಇದರಿಂದ ಹಲವು ರೀತಿಯ ಪ್ರಯೋಜನಗಳು ದೊರೆಯಲಿವೆ.
ಮಾರುಕಟ್ಟೆಯಲ್ಲಿನ ವಿವಿಧ ಸಾವಯವ ಬ್ರಾಂಡ್ಗಳು ಗ್ರಾಹಕರಿಗೆ ಹಲವಾರು ಉತ್ಪನ್ನಗಳನ್ನು ಒದಗಿಸುತ್ತವೆ. ಆದರೆ ಕೊನೆಯದಾಗಿ, ಸಾವಯವ ಆಯ್ದುಕೊಳ್ಳುವುದು ನಿಮ್ಮ ವೈಯಕ್ತಿಕ ಜೀವನಶೈಲಿಯ ಆಯ್ಕೆಯಾಗಿದೆ. ಸಾವಯವ ಆಹಾರವನ್ನು ಕೇವಲ ಟ್ರೆಂಡ್ ಎಂದು ಆರಿಸದೆ ಹೆಚ್ಚು ವಿಶ್ವಾಸಾರ್ಹ ಆಹಾರವೆಂಬ ಆಧಾರದಲ್ಲಿ ಆಯ್ದುಕೊಳ್ಳುವುದು ಅವಶ್ಯಕ.
ಆದರೆ, ಮಾರುಕಟ್ಟೆಯಲ್ಲಿ ಪ್ರಚಲಿತವಿರುವ ʼಸಾವಯವʼ ಎಂಬ ಬಲೆಗೆ ಬೀಳಬೇಡಿ. ಲೇಬಲ್ ಸರಿಯಾಗಿ ಓದಿ! ಮಾರುಕಟ್ಟೆಯಲ್ಲಿ ಸದ್ಯ ಹಲವಾರು ಉತ್ಪನ್ನಗಳು ಸಾವಯವ ಎಂಬ ಹಣೆಪಟ್ಟಿಯೊಂದಗಿ ಲಭ್ಯವಿದೆ. ಆದರೆ ಇವು ಉಳಿದ ಸಂಸ್ಕರಿಸಿದ ಆಹಾರಗಳಿಗಿಂತ ಯಾವ ರೀತಿಯಲ್ಲೂ ಭಿನ್ನವಾಗಿರುವುದಿಲ್ಲ.
ನಿಮ್ಮ ದೇಹದಲ್ಲಿ, ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಕೀಟನಾಶಕಗಳ ಪ್ರಮಾಣ ಕಡಿಮೆಯಾಗಬೇಕೆಂದು ನೀವು ಬಯಸಿದರೆ, ಸಾವಯವ ಉತ್ಪನ್ನಗಳು ನಿಮಗೆ ಉತ್ತಮ ಪರ್ಯಾಯವಾಗಿದೆ. ಬೋನಸ್ ಆಗಿ, ಸಾವಯವ ಆಹಾರಗಳು ಪರಿಸರ ವಿಜ್ಞಾನ ಮತ್ತು ಜೀವವೈವಿಧ್ಯತೆಯ ಬಗ್ಗೆ ಕಾಳಜಿ ವಹಿಸುವವರಿಗೆ ಅಮೂರ್ತ ಮೌಲ್ಯವನ್ನು ಹೊಂದಿವೆ.
ವಸ್ಮಿತ ಯಶವಂತ್
ಪೋಷಕಾಹಾರ ತಜ್ಞೆ