ಅನಾದಿ ಕಾಲದಿಂದಲೂ ಆಹಾರದ ಅಭಿಮಾನಿಗಳ ನಡುವೆ ʼಅಕ್ಕಿʼ ಚರ್ಚೆಯ ನೆಚ್ಚಿನ ವಿಷಯವಾಗಿದೆ. ಕೆಲವರು ಅದರಿಂದ ದೂರವಿರುವಂತೆ ಸಲಹೆ ನೀಡುತ್ತಾರೆ ಮತ್ತು ಇನ್ನೂ ಕೆಲವರು ಇದನ್ನು ನಮ್ಮ ದೈನಂದಿನ ಆಹಾರಕ್ರಮದಲ್ಲಿ ಪ್ರಧಾನ ಆಹಾರವಾಗಿಸಿಕೊಳ್ಳುವಂತೆ ಹೇಳುತ್ತಾರೆ. ಕೆಂಪು ಅಕ್ಕಿ, ಕಂದು ಅಕ್ಕಿ ಮತ್ತು ಮುಂತಾದ ಆರೋಗ್ಯಕರ ಆಯ್ಕೆಗಳಿಗೆ ಬದಲಾಯಿಸಲು ಕೆಲವರು ಸಲಹೆ ನೀಡುತ್ತಾರೆ. ಆರೋಗ್ಯಕರ ಆಯ್ಕೆಯ ವಿಷಯದಲ್ಲಿ, ಈ “ನಿಷೇಧಿತ ಅಕ್ಕಿ”ಗೆ ಹೆಚ್ಚಿನ ಬೇಡಿಕೆಯಿದೆ.
ಹೌದು ನೀವು ಕೇಳಿಸಿಕೊಂಡಿದ್ದು ಸರಿಯಿದೆ, ಇದು ನಿಷೇಧಿತ ಅಕ್ಕಿಯಾಗಿತ್ತು.
ಕಪ್ಪು ಅಕ್ಕಿಯನ್ನು ಒಂದು ಕಾಲದಲ್ಲಿ ನಿಷೇಧಿತ ಅಕ್ಕಿಯೆಂದು ಕರೆಯಲಾಗುತ್ತಿತ್ತು. ಈ ಅಕ್ಕಿ ಪ್ರಾಚೀನ ಚೀನಾದ ಇತಿಹಾಸದಷ್ಟೇ ಹಳೆಯದು. ಆಗಿ ಚೀನಾದ ಜನರು ಈ ಕಪ್ಪು ಅಕ್ಕಿಯ ಪ್ರಭೇದವನ್ನು ಆಹಾರವಾಗಿ ಬಳಸುತ್ತಿದ್ದರು. ಮೂತ್ರಪಿಂಡ, ಹೊಟ್ಟೆ ಮತ್ತು ಯಕೃತ್ತಿನ ನೋವುಗಳಿಗೆ ಅವರು ಇದನ್ನು ತಿನ್ನುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಚೀನಾದ ದೊಡ್ಡ ಮನುಷ್ಯರುಗಳು ಇದರ ಮೇಲೆ ಹಿಡಿತ ಸಾಧಿಸಿ ಇದನ್ನು ಜನಸಾಮಾನ್ಯರ ಪಾಲಿಗೆ ನಿಷೇಧಿಸಿಬಿಟ್ಟರು. ಇದಾದ ಮೇಲೆ ಕಪ್ಪು ಅಕ್ಕಿ ಕೇವಲ ಶ್ರೀಮಂತ ಮತ್ತು ಗಣ್ಯ ವರ್ಗಗಳ ಆಸ್ತಿಯಾಯಿತು; ಅದೂ ಸೀಮಿತ ಪ್ರಮಾಣದಲ್ಲಿ ಮತ್ತು ತೀವ್ರ ಪರಿಶೀಲನೆಯಡಿಯಲ್ಲಿ. ಸಾಮಾನ್ಯರಿಗೆ ಇದನ್ನು ಸೇವಿಸಲು ಅವಕಾಶವಿರಲಿಲ್ಲ ಹೀಗೆ ಇದು ನಿಷೇಧಿತ ಅಕ್ಕಿಯಾಯಿತು.
ಕಪ್ಪು ಅಕ್ಕಿಯ ಮುಖ್ಯ 5 ಆರೋಗ್ಯ ಪ್ರಯೋಜನಗಳು
ಕಾಲ ಕಳೆದಂತೆ, ಕಪ್ಪು ಅಕ್ಕಿ ಎಲ್ಲಾ ವರ್ಗದ ಜನರಲ್ಲಿ ಜನಪ್ರಿಯವಾಗಿದೆ. ಭಾರತದಲ್ಲಿ, ಇದನ್ನು ಮುಖ್ಯವಾಗಿ ಈಶಾನ್ಯ ಪ್ರದೇಶ (ಚಕ್ ಹಾವೊ) ಮತ್ತು ಭಾರತದ ದಕ್ಷಿಣ ಭಾಗಗಳಲ್ಲಿ (ತಮಿಳಿನಲ್ಲಿ ಕವುನಿ) ಬೆಳೆಯಲಾಗುತ್ತದೆ. ಇದು ಅನೇಕ ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಹೊಂದಿದೆ. ಕಪ್ಪು ಅಕ್ಕಿಯ ಐದು ಪ್ರಯೋಜನಗಳು ಇಲ್ಲಿವೆ.
1. ಆಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧ
ಕಪ್ಪು ಅಕ್ಕಿಯ ಎಲ್ಲಾ ಬಗೆಯ ಅಕ್ಕಿಗಳಲ್ಲಿ ಅತಿ ಹೆಚ್ಚು ಆಂಟಿ ಆಕ್ಸಿಡೆಂಟ್ಗಳಿವೆ ಇವೆ. ಕಪ್ಪು ಅಕ್ಕಿಯಲ್ಲಿ ಆಳವಾದ ಕಪ್ಪು ಅಥವಾ ಕೆನ್ನೀಲಿ ಬಣ್ಣವು ಅದರ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಸೂಚಿಸುತ್ತದೆ. ಕಪ್ಪು ಅಕ್ಕಿಯ ಹೊರಗಿನ ಪದರವು ಆಂಥೋಸಯಾನಿನ್ ಎಂಬ ಆಂಟಿ ಆಕ್ಸಿಡೆಂಟ್ ಅನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುತ್ತದೆ. ಆಂಥೋಸಯಾನಿನ್ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2. ಫೈಬರ್ನ ಉತ್ತಮ ಮೂಲ
ಪ್ರತಿ ಅರ್ಧ ಕಪ್ ಕಪ್ಪು ಅಕ್ಕಿಯ ಅನ್ನದಲ್ಲಿ, ಮೂರು ಗ್ರಾಂ ಫೈಬರ್ ಇರುತ್ತದೆ. ಸಮೃದ್ಧವಾದ ಫೈಬರ್ ಅಂಶವು ಕರುಳಿನ ಚಲನೆಯನ್ನು ನಿಯಂತ್ರಿಸಲು, ಮಲಬದ್ಧತೆ, ಅತಿಸಾರ ಮತ್ತು ಹೊಟ್ಟೆ ಉಬ್ಬರ ತಡೆಯಲು ಸಹಾಯ ಮಾಡುತ್ತದೆ. ಜೀರ್ಣಾಂಗವ್ಯೂಹದ ವಿಷ ಮತ್ತು ತ್ಯಾಜ್ಯವನ್ನು ಬಂಧಿಸಿ ಜೀರ್ಣಕ್ರಿಯೆಯ ಚಕ್ರ ಪೂರ್ಣಗೊಂಡ ನಂತರ ಅದನ್ನು ಹೊರಹಾಕಲು ಫೈಬರ್ ಸಹಾಯ ಮಾಡುತ್ತದೆ. ಕೊಬ್ಬಿನ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಲು ಫೈಬರ್ ಸಹ ನಿಮಗೆ ಸಹಾಯ ಮಾಡುತ್ತದೆ, ಏಕೆಂದರೆ ಇದರ ಸೇವನೆಯ ನಂತರ ಹೊಟ್ಟೆ ತುಂಬಿದೆಯೆನ್ನುವ ಭಾವನೆಯನ್ನು ತರುತ್ತದೆ.
3. ಬೊಜ್ಜಿನ ಅಪಾಯವನ್ನು ತಡೆಯುತ್ತದೆ
ನೀವು ಸ್ಥೂಲಕಾಯದ ವಿರುದ್ಧ ಹೋರಾಡುತ್ತಿದ್ದಲ್ಲಿ, ಕಪ್ಪು ಅಕ್ಕಿ ಬುದ್ಧಿವಂತ ಆಯ್ಕೆಯಾಗಿದೆ. ಇದು ಫೈಬರ್ನಿಂದ ಕೂಡಿರುವುದರಿಂದಾಗಿ, ನಿಮ್ಮಲ್ಲಿ ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
4. ನೈಸರ್ಗಿಕ ಡಿಟಾಕ್ಸಿಫೈಯರ್ (ವಿಷ ನಿರ್ಮೂಲನಕಾರಿ) ಆಗಿ ಕೆಲಸ ಮಾಡುತ್ತದೆ
ಜಂಕ್ ಫುಡ್ ಮತ್ತು ಅತಿಯಾದ ತಿನ್ನುಬಾಕತನದ ಈ ಯುಗದಲ್ಲಿ, ನೈಸರ್ಗಿಕ ನಿರ್ವಿಷಗೊಳಿಸುವಿಕೆ ಹಲವಾರು ರೋಗಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಕಪ್ಪು ಅಕ್ಕಿ ಫೈಟೊನ್ಯೂಟ್ರಿಯೆಂಟ್ಗಳ ಸಮೃದ್ಧ ಮೂಲವಾಗಿದೆ, ಇದು ನೈಸರ್ಗಿಕ ನಿರ್ವಿಷಗೊಳಿಸುವಿಕೆ ಮಾಡುತ್ತದೆ ಮತ್ತು ದೇಹದಿಂದ ರೋಗ-ಉಂಟುಮಾಡುವ ಫ್ರೀ ರ್ಯಾಡಿಕಲ್ಗಳನ್ನು ತೆಗೆದುಹಾಕುತ್ತದೆ.
5. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ಕಪ್ಪು ಅಕ್ಕಿ ಹೆಚ್ಚು ಫೈಬರ್ ಮತ್ತು ಕಡಿಮೆ ಕೊಬ್ಬನ್ನು ಹೊಂದಿರುತ್ತದೆ, ಎರಡೂ ಹೃದಯದ ಆರೋಗ್ಯದ ವಿಷಯದಲ್ಲಿ ಗಮನಾರ್ಹವಾದವು. ಫೈಬರ್ ಹೆಚ್ಚುವರಿ ಕೊಲೆಸ್ಟ್ರಾಲ್ ಮತ್ತು ಕಡಿಮೆ ರಕ್ತದೊತ್ತಡವನ್ನು ಗುಣಪಡಿಸಲು ಸಹಾಯ ಮಾಡುತ್ತದೆ, ಕಡಿಮೆ ಮಟ್ಟದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ವಿವಿಧ ಹೃದಯ ಕಾಯಿಲೆಗಳನ್ನು ತಡೆಯುತ್ತದೆ.
ಕಪ್ಪು ಅಕ್ಕಿಯು ನಮ್ಮ ದೇಹಕ್ಕೆ ಒದಗಿಸುವ ಪೌಷ್ಟಿಕಾಂಶಗಳ ಕುರಿತು ತಿಳಿದೆವು. ಜೊತೆಗೆ ಇದರ ಸೇವನೆಯನ್ನೂ ಬಲವಾಗಿ ಶಿಫಾರಸು ಮಾಡಲಾಗಿದೆ. ಅದ್ಭುತ ಆರೋಗ್ಯಕರ ಮತ್ತು ಸುಲಭವಾಗಿ ತಯಾರಿಸಬಹುದಾದ ಎರಡು ಪಾಕವಿಧಾನಗಳನ್ನು ನಾವು ಸಂಗ್ರಹಿಸಿದ್ದೇವೆ. ಅವುಗಳನ್ನು ತಯಾರಿಸಿ ಆನಂದಿಸಿ.
ಕಪ್ಪು ಅಕ್ಕಿಸಲಾಡ್
ಸಾಮಾಗ್ರಿಗಳು
- 150 ಗ್ರಾಂ ಕಪ್ಪು ಅಕ್ಕಿ
- 04 ಸೆಂ.ಮೀ ಶುಂಠಿ,
- 200 ಗ್ರಾಂ ಜೋಳ
- 150 ಗ್ರಾಂ ಮಾವು, ತುಂಡುಗಳು
- ಅಲಂಕರಿಸಲು ಬೆಸಿಲ್
- 2 ಕೆಂಪು ಮೆಣಸಿನಕಾಯಿ, ಬೀಜಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿದ್ದು
- ಮೆಣಸು ಮತ್ತು ಉಪ್ಪು

ತಯಾರಿಸುವ ವಿಧಾನ
- ಅಕ್ಕಿ, ಶುಂಠಿ ಚೂರುಗಳು ಮತ್ತು ನೀರನ್ನು ಮಧ್ಯಮ ಗಾತ್ರದ ಪ್ಯಾನ್ಗೆ ಹಾಕಿ ಮತ್ತು ಉರಿಯನ್ನು ಹೆಚ್ಚು ಮಾಡಿ. ಅಕ್ಕಿ ಅನ್ನವಾಗುವ ತನಕ ಬೇಯಿಸಿ. ಬೇಯಿಸಿದ ನಂತರ, ಬಸಿದು ತಣ್ಣಗಾಗಲು ಬಿಡಿ.
- ಅಳತೆ ಕಪ್ನಲ್ಲಿ ನಿಂಬೆ, ಶುಂಠಿ ಮತ್ತು ವಿನೆಗರ್ ಬೆರೆಸಿ ಡ್ರೆಸ್ಸಿಂಗ್ ಮಾಡಿ. ಎಲ್ಲವನ್ನೂ ಮಿಶ್ರಣ ಮಾಡಲು ಸ್ಟಿಕ್ ಬ್ಲೆಂಡರ್ ಬಳಸಿ.
- ಒಂದು ಪಾತ್ರೆಯಲ್ಲಿ ಅನ್ನ, ಮಾವು, ಬೆಸೆಲ್ ಮತ್ತು ಕೆಂಪು ಮೆಣಸಿನಕಾಯಿಯನ್ನು ಒಟ್ಟಿಗೆ ಸೇರಿಸಿ. ಡ್ರೆಸ್ಸಿಂಗ್ನ ಅರ್ಧದಷ್ಟು ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ.
ಕಪ್ಪು ಅಕ್ಕಿಯ ದೋಸೆ ಮಾಡುವ ವಿಧಾನ
ಪದಾರ್ಥಗಳು
- ಕಪ್ಪು ಅಕ್ಕಿ: 1 ಕಪ್
- ಸಿಪ್ಪೆ ಸುಲಿದ ಉದ್ದಿನ ಬೇಳೆ: 1/2 ಕಪ್
- ಕಲ್ಲುಪ್ಪು: 1 ಟೀಸ್ಪೂನ್
- ದೇಸಿ ತುಪ್ಪ: 1 ಟೀಸ್ಪೂನ್
- ನೀರು: 2 ಕಪ್
ವಿಧಾನ:
- ಅಕ್ಕಿ ಮತ್ತು ಬೇಳೆಯನ್ನು 6 ಗಂಟೆಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ
- ನೀರನ್ನು ಬಸಿದು ಮತ್ತು ಅಕ್ಕಿ ಮತ್ತು ಬೇಳೆಯನ್ನು 2 ಕಪ್ ನೀರಿನೊಂಂದಿಗೆ ರುಬ್ಬಿಕೊಳ್ಳಿ.
- ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಡಿ.
- ನಾನ್-ಸ್ಟಿಕ್ ಪ್ಯಾನ್ ಮೇಲೆ ತುಪ್ಪವನ್ನು ಹಚ್ಚಿ ಸೌಟಿನಿಂದ ಸಾಧ್ಯವಿರುವಷ್ಟು ತೆಳುವಾಗಿ ಹಿಟ್ಟನ್ನು ಎರೆಯಿರಿ.
- ನಿಮ್ಮ ಆಯ್ಕೆಯ ಚಟ್ನಿಯೊಂದಿಗೆ ಬಡಿಸಿ.